ಕುಲದೇವತಾ ಪದ್ಧತಿ

ಸರ್ವಚೇತನವಾದವನ್ನು (ಆನಿಮಿಸಂ) ಒಪ್ಪುವ ಅನೇಕ ಮತಧರ್ಮಗಳವರು ಯಾವುದಾದರೂ ಒಂದು ವಸ್ತುವನ್ನು, ಅದರಲ್ಲೂ ಒಂದು ಪ್ರಾಣಿಯನ್ನು, ಕುಲದೇವತೆಯೆಂದು ತಿಳಿದು ಆರಾಧಿಸುವ ಪದ್ಧತಿ (ಟೋಟೆಮಿಸಂ). ಪ್ರಾಚೀನ ಸಮಾಜದಲ್ಲಿ ಪ್ರತಿಯೊಂದು ಸಂತತಿಯವರಿಗೂ ಒಂದೊಂದು ಕುಲದೇವತೆ ಇತ್ತು. ಮರ, ಗಿಡ, ಬಳ್ಳಿ, ಮೃಗ, ಇಲ್ಲವೇ ಪ್ರಕೃತಿ ಪ್ರಪಂಚದಲ್ಲಿನ ಅತಿಪ್ರಿಯವಾದ ಯಾವುದಾದರೊಂದು ವಸ್ತುವನ್ನವರು ಅತ್ಯಮೂಲ್ಯವಾದುದೆಂದೂ ಅತಿ ಪೂಜಾಯೋಗ್ಯವೆಂದೂ ಪರಿಗಣಿಸಿ ಅದನ್ನು ಆರಾಧಿಸುತ್ತಿದ್ದುದು ಸರ್ವೇ ಸಾಧಾರಣವಾಗಿ ರೂಢಿಯಲ್ಲಿತ್ತು. ಕುಲದೇವತೆ ತಮ್ಮ ವಂಶದ ಮೂಲಪುರುಷನೆಂದು ತಿಳಿದು, ಅದನ್ನು ನೋಯಿಸುವುದಾಗಲಿ, ಹೀಯಾಳಿಸುವುದಾಗಲಿ, ಇಲ್ಲವೇ ಭಕ್ಷಿಸುವುದಾಗಲಿ ಸರಿಯಲ್ಲವೆಂದು ಅವರು ನಂಬಿದ್ದರು. ಕುಲದೇವತೆಯನ್ನು ಪೂಜಿಸುವುದರಿಂದ ಶ್ರೇಯಸ್ಸು ದೊರಕುವುದೆಂದು ತಿಳಿದ ಅವರು ತಲೆಮಾರುಗಳಿಂದ ಅದನ್ನು ಉಳಿಸಿಕೊಂಡು ಬರುತ್ತಿದ್ದರು. ತಮ್ಮ ಆಭರಣಗಳಲ್ಲಿ ಅದರ ಚಿತ್ರವನ್ನು ಕೊರೆಸಿಕೊಳ್ಳುತ್ತಿದ್ದರು. ತಮ್ಮ ಮೈಮೇಲೆ ಅದನ್ನು ಹಚ್ಚೆಯಾಗಿ ಹುಯ್ಸಿಕೊಳ್ಳುತ್ತಿದ್ದರು. ರಕ್ತಸಂಬಂಧವುಳ್ಳ ಜನಗಳ ಒಂದೊಂದು ಗುಂಪನ್ನೂ ಆಯಾ ಕುಲದೇವತೆಯ ಆರಾಧನೆಯಿಂದ ಗುರುತಿಸಬಹುದಾಗಿತ್ತು. 

	ಹೀಗಾಗಿ ಕುಲದೇವತಾ ಪದ್ಧತಿ ಜನಗಳನ್ನು ಸಂಘಟಿಸುವ ಒಂದು ಸಾಧನೆಯಾಗಿತ್ತು. ಉದಾಹರಣೆಗೆ, ಡೆಲ್ಕಿಖಾರಿಯ ಜನಗಳಲ್ಲಿ ಎಂಟು ಕುಲಪಂಗಡಗಳಿವೆ. ಪ್ರತಿಯೊಂದು ಬುಡಕಟ್ಟೂ ಒಂದೊಂದು ಕುಲದೇವತೆಯನ್ನು ಆರಾಧಿಸುತ್ತದೆ. ಪ್ರತಿಯೊಂದರಲ್ಲೂ ಇರುವ ಜನಗಳಿಗೆ ಇದರಿಂದ ಸಾಮರಸ್ಯ ಹೆಚ್ಚಲು ಅವಕಾಶವಿದೆ. ಇವುಗಳಲ್ಲಿ ಮುರ ಎಂಬ ತಂಡ ಆಮೆಯನ್ನೂ ಸೊರನ್ ಎಂಬ ತಂಡ ಕಲ್ಲನ್ನೂ ಸಮದ್ ಎಂಬ ತಂಡ ಜಿಂಕೆಯನ್ನೂ ಕೇಜ್ ಎಂಬ ತಂಡ ಲಾವಕ್ಕಿಯನ್ನೂ ಕಾರ್ಲಿಹ ತಂಡ ಒಂದು ಹಣ್ಣನ್ನೂ ಜರ್ಹದ್ ಎಂಬ ಗುಂಪು ಒಂದು ಪಕ್ಷಿಯನ್ನೂ ಹನ್ಸ್ದ ಎಂಬ ಗುಂಪು ಹಾವು ಮೀನನ್ನೂ ಮೈಲ್ ಎಂಬ ತಂಡ ಮಣ್ಣನ್ನೂ ಕಿರೋ ಎಂಬ ತಂಡ ಹುಲಿಯನ್ನೂ ಟೊಪ್ನೊ ಎಂಬ ಗುಂಪು ಒಂದು ತರಹೆಯ ಹಕ್ಕಿಯನ್ನೂ ಕುಲದೇವತೆಯೆಂದು ಆರಾಧಿಸುತ್ತವೆ. ಇಂಥ ಉದಾಹರಣೆಗಳನ್ನು ಪ್ರಪಂಚದ ಎಲ್ಲ ಜನಾಂಗಗಳಲ್ಲಿಯೂ ಕಾಣಬಹುದೆಂದು ಮಾನವಶಾಸ್ತ್ರಜ್ಞರು ನಿರ್ಧರಿಸಿದ್ದಾರೆ. ತೋಡರು ತಮ್ಮ ಕುಲದೇವತೆ ಎಮ್ಮೆ ಎಂದೂ ಅಮೆರಿಕದ ಆದಿವಾಸಿಗಳು ಕಾಗೆ ಮತ್ತು ಮೊಸಳೆಗಳನ್ನು ತಮ್ಮ ಕುಲದೇವರೆಂದೂ ಭಾರತದ ಕಾಡುಜನ ನಾಗರಹಾವು ತಮ್ಮ ಕುಲದೇವರು ಎಂದೂ ಆರಾಧಿಸುವುದು ವಾಡಿಕೆಯಲ್ಲಿತ್ತು. ಕುಲದೇವತೆಗಳನ್ನು ಹಿಂಸಿಸಿದವರನ್ನೂ ಕೊಂದವರನ್ನೂ ಇತರ ರೀತಿಯಲ್ಲಿ ಅವಮಾನಕ್ಕೀಡು ಮಾಡಿದವರನ್ನೂ ಕಠಿಣ ಶಿಕ್ಷೆಗೆ ಗುರಿಮಾಡುತ್ತಿದ್ದರು. ಇದರಿಂದಾಗಿ ಸಮಾಜದಲ್ಲಿ ಕೆಲವು ಕಟ್ಟಳೆಗಳನ್ನೂ ಬಹಿಷ್ಕಾರಾಜ್ಞೆಗಳನ್ನೂ ವಿಧಿಸಲಾಗಿತ್ತು. ಆಯಾ ಕುಲದೇವತೆಯ ಪೀಳಿಗೆಯವರು ತಾವೆಂದು ಒಂದೊಂದು ಗುಂಪಿನವರೂ ಹೇಳಿಕೊಳ್ಳುವ ರೂಢಿಯುಂಟು. ಒಂದೇ ಕುಲದೇವತೆಯ ಬಳಗದಲ್ಲಿ ಹೆಣ್ಣಿನ ಕೊಳುಕೊಡೆ ಇರುತ್ತಿರಲಿಲ್ಲ. ತೋಡರು ತಮ್ಮ ಕುಲದೇವತೆಯಾದ ಎಮ್ಮೆಯ ಸಗಣಿಯನ್ನು ಸಹ ತಮ್ಮ ಹೆಂಗಸರು ಮುಟ್ಟಕೂಡದೆಂದೂ ಎಮ್ಮೆ ಓಡಾಡಿದ ಕಡೆ ಓಡಾಡಕೂಡದೆಂದೂ ಹಾಗೆ ಮಾಡಿದರೆ ತಮ್ಮ ವಂಶಕ್ಕೆ ಕಳಂಕವಾಗುವುದೆಂದೂ ವಿಧಿಸಿದ್ದರು. ಇದರಂತೆಯೇ ಅನೇಕ ಪೂರ್ವಜರ ಗುಂಪುಗಳು ತಮ್ಮ ನೈತಿಕ ಬೆಳೆವಣಿಗೆಗೆ ಅನ್ವಯಿಸುವಂತೆ ಕುಲದೇವತೆಯ ಆರಾಧನೆಯನ್ನು ರೂಪಿಸಿಕೊಂಡಿದ್ದರು. 

	ಕುಲದೇವತಾಪದ್ಧತಿಯ ವಿಷಯವಾಗಿ ಗೋಲ್ಡನ್‍ವೀಸ್ ಎಂಬ ಶಾಸ್ತ್ರಜ್ಞ 1910ರಲ್ಲಿ ತನ್ನ ವ್ಯಾಖ್ಯಾನವನ್ನು ಬರೆಯುವ ತನಕ ಮಾನವಶಾಸ್ತ್ರಜ್ಞರು ಇದರ ಬಗ್ಗೆ ಯಾವ ನಿರ್ಧಾರಕ್ಕೂ ಬಾರದವರಾಗಿದ್ದರು. ಈವರೆವಿಗೆ ಪ್ರಖ್ಯಾತ ಮಾನವಶಾಸ್ತ್ರಜ್ಞರಾದ ಲ್ಯಾಂಗ್, ಡರ್ಕ್‍ಹೀಮ್, ಫ್ರೇಸóರ್, ರಿವರ್ಸ್ ಮೊದಲಾದವರು ಇವರ ಬಗ್ಗೆ ವಿಚಾರ ನಡೆಸಿದ್ದಾರೆ. ಕೆಲವು ಶಾಸ್ತ್ರಜ್ಞರು ಕುಲದೇವತಾ ಪದ್ಧತಿಯಲ್ಲಿ ಸಮಾಜದ ಭದ್ರತೆಗೆ ಅನುಕೂಲವಾದ ಅಂಶಗಳೇನೂ ಇಲ್ಲವೆಂದೂ ಸಣ್ಣಪುಟ್ಟ ವ್ಯಾಪಾರಗಳಿಗನುಕೂಲವಾಗುವಂತೆ ಕುಲದೇವತಾ ಪದ್ಧತಿಯನ್ನು ಅವಲಂಬಿಸಿರಬಹುದೆಂದೂ ನಂಬಿದ್ದರು. ಮತ್ತೆ ಕೆಲವರು ಇದು ಸಮಾಜದ ಆವಶ್ಯಕತೆಗಳನ್ನು ಒದಗಿಸುವ ದುಡಿಮೆಗಳಿಗೆ ಅನ್ವಯಿಸಿದುದೆಂದು ತಿಳಿದಿದ್ದರು. ಗರ್ಭಾಧಾನಕ್ಕೆ ಲೈಂಗಿಕ ಸಮ್ಮಿಳನವನ್ನು ಬಿಟ್ಟು ಒಂದು ಗಿಡವೊ ಮೃಗವೊ ಕಾರಣವೆಂದು ತಿಳಿದು ಅವನ್ನು ಆರಾಧಿಸುತ್ತಿದ್ದ ಆಸ್ಟ್ರೇಲಿಯದ ಕಾಡುಜನರ ಬಗ್ಗೆ ಫ್ರೇಸರ್ ಬರೆದಿದ್ದಾನೆ. ಮಾನವನಿಗೆ ಆಹಾರಾದಿಗಳನ್ನು ಕೊಡುವವಾಗಿ ಎಮ್ಮೆ ಮುಂತಾದುವನ್ನು ಕುಲದೇವತೆಗಳನ್ನಾಗಿ ಕೆಲವರು ಪೂಜೆ ಮಾಡುತ್ತಿರಬಹುದೆಂದು ಹಾಪ್‍ಕಿನ್ನನ ಅಭಿಪ್ರಾಯ. ಮನುಷ್ಯನನ್ನು ಸಂಘಜೀವಿಯಾಗಿ ಮಾಡಲೋಸುಗವಾಗಿಯೇ ಕುಲದೇವತಾ ಪದ್ಧತಿ ಜಾರಿಗೆ ಬಂತೆಂದು ಡರ್ಕ್‍ಹೀಮನ ಅಭಿಮತ. ಪ್ರಾಚೀನ ಮಾನವ ಸತ್ತಾಗ ಆತನ ಜೀವ ಒಂದು ಮೃಗದಲ್ಲಿಯೊ ಇಲ್ಲವೆ ಒಂದು ಗಿಡದಲ್ಲಿಯೊ ಸೇರಿಕೊಳ್ಳುತ್ತದೆಂದೂ ಅವರೆಲ್ಲರೂ ಆ ಮೃಗವನ್ನೊ ಇಲ್ಲವೆ ಗಿಡವನ್ನೊ ಆರಾಧಿಸುವ ಪದ್ಧತಿ ಹುಟ್ಟಿ ಕಾಲಕ್ರಮೇಣ ಪವಿತ್ರತೆಯನ್ನು ಪಡೆದು ಮನುಷ್ಯನ ಪರಸ್ಪರ ಸಂಘಜೀವನಕ್ಕೆ ಎಡೆಯಾಯಿತೆಂದು ಟೈಲರನ ಅಭಿಪ್ರಾಯ. ಮೃಗಗಳಿಗೂ ಮರಗಳಿಗೂ ಬಳ್ಳಿಗಳಿಗೂ ಪ್ರಕೃತಿನಿಯಮಗಳಿಗೂ ಸಂಬಂಧವನ್ನು ಗುರುತಿಸಿದ ಮಾನವ ಕುಲದೇವತಾ ಕಲ್ಪನೆಗೆ ಮನಗೊಟ್ಟಿರಬಹುದೆಂದು ಬೊವಾಸ್ ಪಂಡಿತನ ಅಭಿಪ್ರಾಯ. ಇವುಗಳೆಲ್ಲವನ್ನೂ ಪರಿಶೀಲಿಸಿ ಗೋಲ್ಡನ್‍ವೀಸ್ ಕುಲದೇವತಾಪದ್ದತಿ ಸಮಾಜದಲ್ಲಿ ಮತಶ್ರದ್ಧೆಯನ್ನು ಕಲ್ಪಿಸಿ, ಒಡನಾಡಿಗಳೊಂದಿಗೆ ಸಹ ಜೀವನವನ್ನು ಮೂಡಿಸುವ ಒಂದು ಸಮಾಜಸಂಸ್ಥೆಯೆಂದು ಹೇಳಿದ್ದಾನೆ.

	ಭಾರತದಲ್ಲಿ ಕುಲದೇವತಾ ಪದ್ಧತಿಯಲ್ಲಿ ಮತಶ್ರದ್ದೆ ಅಷ್ಟು ಪ್ರಬಲವಾಗಿಲ್ಲವೆಂದೂ ಒಡನಾಡಿಗರೊಂದಿಗೆ ಸಹಜೀವನವನ್ನು ಮಾಡುವ ಸಂಸ್ಥೆಯಾಗಿ ಮಾತ್ರ ಅದು ಉಳಿದುಬಂದಿದೆಯೆಂದೂ ಹರ್ಬರ್ಟ್ ರಿಸ್ಲೆ ಅಭಿಪ್ರಾಯ ಪಟ್ಟಿದ್ದಾನೆ. ಇದು ಸಮಂಜಸವಾಗಿ ತೋರದು. ಆಕಸ್ಮಿಕವಾಗಿ ಮನುಷ್ಯನಿಗೂ ಮೃಗಬಳ್ಳಿಗಳಿಗೂ ಒಂದು ತೆರನಾದ ಸಂಬಂಧವೇರ್ಪಟ್ಟಾಗ ಈ ಪದ್ಧತಿ ಉದ್ಭವಿಸಿದೆಯೆಂದು ಹೇಳಬಹುದು. ಉದಾಹರಣೆಗಾಗಿ ಜಂಗ್ ಜನರ ಬಗ್ಗೆ ಎಲ್ವಿನ್ ಹೇಳಿರುವಂತೆ ಒಬ್ಬ ಒಂದು ಪಾರಿವಾಳವನ್ನು ಕೊಲ್ಲಬಹುದು, ಆದರೆ ಆತ ಕೊಂದ ಮೇಲೆ ಆಕಸ್ಮಿಕವಾಗಿ ಕುರುಡನಾಗಬಹುದು. ಕುರುಡನಾದ ಮೇಲೆ ಪಾರಿವಾಳವನ್ನು ಕೊಂದುದಕ್ಕೆ ತನಗೆ ಕುರುಡು ಬಂದಿತೆಂದು ತಿಳಿಯುವ ಆತ ಪಾರಿವಾಳಗಳನ್ನೇ ಆರಾಧಿಸಲು ಯತ್ನಿಸಬಹುದು. ಹೀಗೆ ಕಾಲಕ್ರಮೇಣ ಪಾರಿವಾಳಗಳೇ ಕುಲದೇವತೆಗಳಾಗುವ ಸಂಭವ ಉಂಟು. ಆದ್ದರಿಂದ ಕುಲದೇವತಾಪದ್ಧತಿ ಒಂದು ಆಕಸ್ಮಿಕ ಸನ್ನಿವೇಶದಲ್ಲಿ ಉದ್ಭವಿಸಿದೆಯೆಂದು ಹೇಳಿದರೆ ತಪ್ಪಾಗಲಾರದು. ಹರ್ಟ್, ಫ್ರೇಸರ್, ರಾಯ್ ಮೊದಲಾದವರು ಈ ವಾದವನ್ನು ಸ್ವಲ್ಪ ಹೆಚ್ಚುಕಡಿಮೆ ಸಮರ್ಥಿಸಿದ್ದಾರೆ. ಮಾನವ ತನ್ನ ಸುತ್ತಮುತ್ತಲಿನ ಸನ್ನಿವೇಶಕ್ಕೆ ಹೊಂದಿಕೊಂಡು ಹೋಗುವ ಸಲುವಾಗಿ ನೈತಿಕ ಪ್ರಪಂಚದಲ್ಲಿ ತನ್ನ ಚಟುವಟಿಕೆಗಳನ್ನು ಭದ್ರಗೊಳಿಸಲೂ ಅದರಿಂದ ಸಮಾಜದ ಭದ್ರತೆಯನ್ನು ಸಾಧಿಸಲೂ ಕುಲದೇವತಾ ಪದ್ಧತಿಯನ್ನು ರೂಢಿಗೆ ತಂದಂತಿದೆ ಎಂಬ ವಾದ ಅಸಮಂಜಸವಾಗಿ ಕಂಡುಬರುವುದಿಲ್ಲ-ಎಂಬುದು ಆಧುನಿಕ ಮತ. ಈ ವಿಷಯದಲ್ಲಿ ಖಚಿತವಾಗಿ ಏನನ್ನೂ ಹೇಳುಬರುವಂತಿಲ್ಲವೆಂಬುದು ಇಲ್ಲಿ ಗಮನಿಸಬೇಕಾದ ಅಂಶ.						
   (ಕೆ.ಎನ್.ವಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ